—————————
ಕೇವಲ ಅತಿ ಸಣ್ಣ ಗಾತ್ರದ ಮಿಡತೆಗಳ ಹಿಂಡು
ಬೆಳೆಗಳನ್ನು ನಾಶಮಾಡುವ ಮೂಲಕ ಪಾಕಿಸ್ತಾನವನ್ನು ತತ್ತರ ಗೊಳಿಸಿದೆ. ಸೂಕ್ಷ್ಮಾತಿ ಸೂಕ್ಷ್ಮವಾದ ಪೂರ್ತಿ ಜೀವಿ ಅಲ್ಲದ, ಪೂರ್ತಿ ನಿರ್ಜೀವಿ ವಲ್ಲದ ಅರೆಜೀವ ಅವಸ್ಥೆಯ ವೈರಸ್, ಇಂದು ಮಾನವನ ನೆಮ್ಮದಿಯನ್ನೇ ಬುಡಮೇಲು ಮಾಡುತ್ತಿದೆ. ಇಂತಹ ಅಲ್ಲೋಲಕಲ್ಲೋಲ ಗೊಳಿಸುವ ಪ್ರಕ್ರಿಯೆಯೊಂದು ಚೀನಾ ದೇಶದಿಂದ ಮೊದಲು ಗೊಂಡಿದೆ. ಆನೆಗೆ ಅಂಕುಶ ಹಾಕಿ ಆಡಿಸುವ ಮನುಷ್ಯನನ್ನು ಕಣ್ಣಿಗೆ ಕಾಣದ ಜೀವಿಯೊಂದು,ಈ ರೀತಿ ಆಟವಾಡಿಸುತ್ತದೆ ಎಂದರೆ , ಮನುಷ್ಯನಿಗೆ ಆತ್ಮಾವಲೋಕನಕ್ಕೆ ಇದೊಂದು ಸಕಾಲ. ಹಾಗಾದರೆ ಮಾನವ ಎಲ್ಲಿ ತಪ್ಪುತ್ತಿದ್ದಾನೆ ?
ಸೂಕ್ಷ್ಮ ವನ್ನು ಮಟ್ಟ ಹಾಕಬೇಕಾದರೆ ಮಾನವನ ಮನಸ್ಸು ಕೂಡ ಸೂಕ್ಷ್ಮ ಆಗಬೇಕಾಗುತ್ತದೆ., ಸೂಕ್ಷ್ಮಾತಿಸೂಕ್ಷ್ಮ ಆದುದರ ಕಡೆಗೆ ಪ್ರಯಾಣಿಸಬೇಕಾಗುತ್ತದೆ. ಇದು ವೈಜ್ಞಾನಿಕ ಸತ್ಯ ಎಂಬಷ್ಟೇ ನಿಖರತೆಯಿಂದ ಆಧ್ಯಾತ್ಮಿಕ ಸತ್ಯ ಎಂಬುದನ್ನು ಕೂಡ ಒತ್ತಿ ಹೇಳಬೇಕಾಗುತ್ತದೆ. ಅಂದರೆ ಮನಸ್ಸನ್ನು ಸೂಕ್ಷ್ಮಗೊಳಿಸುವ ತಪಸ್ಸಿನಿಂದ ನಾವಿಂದು ದೂರವಾಗುತ್ತಿದ್ದೇವೆಯೇ? ಹಾಗಾದರೆ ಸೂಕ್ಷ್ಮ ವಾಗುವುದು ಎಂದರೆ ಏನು ಮತ್ತು ಹೇಗೆ? ಉಪನಿಷತ್ತಿನಲ್ಲಿ ಹೇಳಿದಂತೆ-” ದೃಶ್ಯತೇ ತ್ವಗ್ರಯಾ ಬುದ್ಧ್ಯಾ ಸೂಕ್ಷ್ಮಯಾ ಸೂಕ್ಷ್ಮ ದರ್ಶಿಭಿಃ ” , ಎಂದ ಈ ಮಾತಿನ ಹುರುಳನ್ನು ಅರಿತು, ಅದರಂತೆ ನಡೆಯುವಲ್ಲಿ ವ್ಯತ್ಯಯ ಆಯಿತೆ? ಸೂಕ್ಷ್ಮವಾದ , ಏಕಾಗ್ರವಾದ ಬುದ್ದಿ ಯಿಂದ ಮಾತ್ರ ಸೂಕ್ಷ್ಮವಾದ ಸತ್ಯವನ್ನು ತಿಳಿಯಬಹುದು ಎಂದು ಶ್ರುತಿ ವಚನ ಸಾರುತ್ತಿದ್ದರೆ, ಆ ಏಕಾಗ್ರತೆಯ ಸಾಧನೆಗೆ ಮನಸ್ಸನ್ನು ಅಣಿ ಮಾಡುವುದು ಹೇಗೆ? ‘ ತಪಸ್ಸು’ ಎಂದರೆ ತನ್ನ ಅಹಂಕಾರವನ್ನು ವಿವೇಕ ,ವೈರಾಗ್ಯ ,ಶಮಾದಿ ಷಟ್ ಸಂಪತ್ತಿ , ಮುಮುಕ್ಷು ತತ್ವಗಳ ಮೂಲಕ ಲಯ ಗೊಳಿಸುವುದೇ ಅಲ್ಲವೇ? ಅದಕ್ಕೂ ಪೂರ್ವದಲ್ಲಿ, ಹೇಳಲಾದ ಉಪಾಸನೆಯ ತಯಾರಿಯಿಂದ ಈ ಉಪಾಯ ಅಥವಾ ಮಾರ್ಗವನ್ನು ನಡೆಯುವಲ್ಲಿ ನಾವು ಎಡವಿ ರುವುದಕ್ಕೆ, ಪ್ರಕೃತಿ ನೀಡುವ ಸಂಕೇತಗಳು ನಾನಾ ಪ್ರಕಾರ. ಪ್ರಕೃತಿ ಮಾತೆ , ಹೊಡೆದು ತೋರಿಸುವುದನ್ನು , ಚಿವುಟಿ ತೋರಿಸುತ್ತಿದ್ದಾಳೆ ಅಷ್ಟೇ.
ಒಂದೊಮ್ಮೆ ಬಿಹಾರದಲ್ಲಿ ಭೂಕಂಪ ಆಗಿದ್ದಾಗ, ಗಾಂಧೀಜಿಯವರು- “ಅಸ್ಪೃಶ್ಯತೆಯನ್ನು ಆಚರಿಸಿದ್ದಕ್ಕೆ ದೇವರು ಕೊಟ್ಟ ಶಾಪ ಇದು” ಎಂದಾಗ ರವೀಂದ್ರನಾಥ್ ಠಾಗೋರರಿಗೆ ಕೂಡ ಗಾಂಧೀಜಿಯವರ ಮಾತು ನುಂಗಲಾರದ ತುತ್ತಾಯಿತು. ಪ್ರಕೃತಿಯ ರಹಸ್ಯವನ್ನು ಬಲ್ಲವರೇ ಬಲ್ಲರು , ಎಲ್ಲರರಿಯರು. ಆದರೆ ಪ್ರಕೃತಿಯ ಈ ಸೂಕ್ಷ್ಮವನ್ನು ಹನುಮಂತ ತಿಳಿದಿದ್ದ. ನಮಗೆ ಪ್ರತಿಕೂಲವಾದ ಸಂಗತಿಯನ್ನು ಮಣಿಸಲು ಸೂಕ್ಷ್ಮವಾಗಬೇಕು ಎಂಬ ಸತ್ಯವನ್ನು ತಿಳಿದಿದ್ದರಿಂದ, ಅವನ ಜ್ಞಾನ ತುಂಬಾ ಸೂಕ್ಷ್ಮವಾದದ್ದು ಆಗಿತ್ತು ಎಂದು ನಾವು ಅರ್ಥೈಸಬಹುದು. ಲಂಕಿಣಿಯು ಬೃಹದಾಕಾರವಾಗಿ ಬೆಳೆದಾಗ ಹನುಮಂತನು ಸಣ್ಣ ಕೀಟದ ರೂಪತಾಳಿ ಆಕೆಯ ಮೂಗಿನ ಹೊಳ್ಳೆಗಳ ಮೂಲಕ ಲಂಕಿಣಿ ಯ ದೇಹದ ಒಳಕ್ಕೂ ಹೊರಕ್ಕೂ ಸಂಚರಿಸಿ, ದೊಡ್ಡ ಗಾತ್ರದ ಆಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ. ಆ ರೀತಿಯ ಸೂಕ್ಷ್ಮ ವಿಧಾನದಿಂದ ಲಂಕಿಣಿ ಎಂಬ ರಾಕ್ಷಸಿಯನ್ನು ಸಂಹರಿಸಿದ. ಮಾನವರಾದ ನಮಗೆ ಇದೇ ಪಾಠವನ್ನು ಜ್ಞಾನಿಯಾದ ಹನುಮಂತ ತೋರಿಸಿಕೊಟ್ಟಿದ್ದಾನೆ. ಪ್ರಕೃತಿಯ ಸಮಸ್ತವನ್ನು ಮಣಿಸಬಲ್ಲ ಕೌಶಲ್ಯದ ಅಹಂಕಾರದ ತುತ್ತ ತುದಿ ಯಲ್ಲಿ ನಿಂತು ಬೀಗುತ್ತಿರುವ, ಪ್ರಕೃತಿಯ ಮೂಲವನ್ನು ಮರೆತಿರುವ ಮಾನವನ ವಿಸ್ಮೃತಿಗೆ ತಕ್ಕ ಪಾಠವನ್ನು ಪ್ರಕೃತಿಯು ಕಲಿಸಿಕೊಟ್ಟಿದೆ, ಕಲಿಸಿಕೊಡುತ್ತದೆ. ಪ್ರಕೃತಿಯ ಮೇಲೆ ಮಾನವನು ಮಾಡಿದ ಅತ್ಯಾಚಾರವನ್ನು ಮರೆಯದ ರೀತಿಯಲ್ಲಿ ಪ್ರಕೃತಿಯು ಇದೆ. ಅದು, ಅಲ್ಲೇ ,ಹಾಗೆಯೇ ಗುಪ್ತ ಚಿತ್ರಗಳಾಗಿ ಪರದೆಯ ಮೇಲೆ ಹಾಯುವುದಕ್ಕೆ ಕಾದು ಕುಳಿತಿರುತ್ತವೆ.! ಮಣಿಯುವುದಿಲ್ಲ ಎಂದು ಕೂತವನನ್ನು ಮಣಿಸಬಲ್ಲೆ ಎಂಬಂತಿದೆ ಅಲ್ಲವೇ ಈ ಪ್ರಕೃತಿ , “ಮೂಲಪ್ರಕೃತಿ”…
ಆಯುರ್ವೇದದಲ್ಲಿ ಚರಕಾಚಾರ್ಯ ಹೇಳಿದ್ದಾನೆ- ” ಪ್ರತ್ಯಕ್ಷಂ ಅಲ್ಪಂ, ಅಪ್ರತ್ಯಕ್ಷಮ್ ಅನಲ್ಪಂ” . ಕಣ್ಣಿಗೆ ಕಾಣುವುದಕ್ಕಿಂತ ಕಾಣದೆ ಇರುವುದು ಹೆಚ್ಚು ,ಅನಂತ. ಅಂದರೆ ಕಾಣದೆ ಇರುವುದರ ಶಕ್ತಿ ಹೆಚ್ಚು ಎಂದು ತಾತ್ಪರ್ಯ. ಕಾಣುವಿಕೆ ಹಾಗೂ ಆಕಾರ ಎಂದರೆ ಶಕ್ತಿಯನ್ನು ಸೀಮಿತಗೊಳಿಸುವುದು ಎಂದು ಅರ್ಥೈಸಬಹುದು. ಕೋರೋನ ವೈರಸ್ ನಂತಹ ಸಂಗತಿ ಹೇಗೆ ಹುಟ್ಟಿಕೊಂಡಿತು ಎಂದು ಕಾಣುವುದಕ್ಕೆ ಅಸಾಧ್ಯವಾದ ರೀತಿಯ ವೇಗದಲ್ಲಿ ಅದು ಬೆಳೆದಿದೆ. ಇಷ್ಟರವರೆಗೆ ಅದು ಪ್ರಕೃತಿಯಲ್ಲಿ ಎಲ್ಲಿ ಅಡಗಿತ್ತು? ಗೊತ್ತಿಲ್ಲ!? ನಿಮ್ಮ ವೇಗಕ್ಕಿಂತ ನನ್ನ ವೇಗವೇ ಹೆಚ್ಚು ಎಂದು ಸವಾಲು ಒಡ್ಡುವ ರೀತಿಯಲ್ಲಿ ಅದು ವಿಜೃಂಭಿಸುತ್ತಾ ಇದೆ. ತಾರಕಾಸುರನ ಅಟ್ಟಹಾಸವನ್ನು ಮಟ್ಟ ಹಾಕುವುದಕ್ಕೆ ದೇವತೆಗಳು
ಬಾಲಕನಾದ ಸ್ಕಂದನಿಗೆ ಶರಣಾಗಬೇಕಾಯಿತು ಎಂದು ಪುರಾಣದಲ್ಲಿ ಕಂಡುಬರುವ ಐತಿಹ್ಯ. ಸತ್ಯ ಹಾಗಿದೆ. ಸಣ್ಣದಾಗಿಯೇ ಕಾಣಿಸಿಕೊಂಡು, ತನ್ನ ದೊಡ್ಡತನವನ್ನು ಗರಿಮೆಯನ್ನು ಹಿರಿಮೆಯನ್ನು ಮೆರೆಯುತ್ತದೆ. ಹಾಗೆ ಮೆರೆಯುವುದಕ್ಕೆ ಸಣ್ಣದಾದ ಒಂದನ್ನು ಆಯ್ಕೆ ಮಾಡುತ್ತದೆ ಎಂಬುದು ಪ್ರಕೃತಿಯದ್ದೇ ಒಂದು ವಿಸ್ಮಯ! ಆದರೆ ಸತ್ಯದ ಕಡೆಗೆ ಹೋಗುವ ದಾರಿಯು, ಸತ್ಯವು ತನ್ನನ್ನು ತೆರೆದು ತೋರುವ ರೀತಿಯು ರುದ್ರರಮಣೀಯ! ರಮಣೀಯವಾದ ಸತ್ಯದ ದರ್ಶನವಾಗಬೇಕಾದರೆ ಒಮ್ಮೆ ಜಗತ್ತಿನ ರುದ್ರ ಅಥವಾ ಭೀಕರತೆಯ ದರ್ಶನವೂ ಸಮಗ್ರವಾಗಿ ಆಗುವುದು ಪ್ರಕೃತಿಯ ಮತ್ತೊಂದು ಸತ್ಯ.ಮತ್ತೊಂದು ಸತ್ಯ ಎನ್ನುವುದಕ್ಕಿಂತ ಸತ್ಯದ್ದೇ ಇನ್ನೊಂದು ಮುಖ ಎನ್ನುವುದು ಹೆಚ್ಚು ಸೂಕ್ತ.
ಒಟ್ಟಿನಲ್ಲಿ, ಸೂಕ್ಷ್ಮವಾದ ಸಂಗತಿಗಳು ಸ್ಥೂಲ ವನ್ನು ನಡುಗಿಸುವಾಗಲಾದರೂ ಆ ಇನ್ನೊಂದು “ಸೂಕ್ಷ್ಮ” ಉಂಟೆಂದು ನಮಗೆ ಅನ್ನಿಸಬಾರದು ಏಕೆ?
ಹಾಗೆ ನಮಗೆ ಅನ್ನಿಸುವುದೇ ಸೂಕ್ಷ್ಮದ ಕಡೆಗಿನ ಪಯಣದ ಹಾದಿಯನ್ನು ನಮಗೆ ತೆರೆದು ತೋರಬಹುದು ಮತ್ತು ಹಾಗೆ ಮನಸ್ಸಿಗೆ ಹೊಳೆಯುವುದು ಕೂಡ ಒಂದು ರೀತಿಯಲ್ಲಿ ಸೂಕ್ಷ್ಮತೆಯೇ. ಬುದ್ಧಿಯು ತನ್ನ ಅನೇಕಾಗ್ರತೆಯನ್ನು ಕಳೆದುಕೊಂಡು, ಏಕಾಗ್ರ ವಾಗುವ ಅಮೂಲ್ಯ ಕ್ಷಣ.
ದರೋಡೆಕೋರನಿಗೆ ತನ್ನ ಮಡದಿಯು- ” ನಿನ್ನದು ನಿನಗೆ ,ನನ್ನದು ನನಗೆ” ಎಂಬ ಮಾತಿನಲ್ಲಿನ ಸೂಕ್ಷ್ಮತೆ ಗೊತ್ತಾಗಿಬಿಟ್ಟಿತ್ತು. ಅದು ಗೊತ್ತಾಗುವುದು ಬುದ್ಧಿಗೆ ತಾನೇ? ಮನಸ್ಸಿಗಲ್ಲ, ಬುದ್ಧಿಗೆ ಆ ವಿವೇಕದ ಉದಯ ಆದುದರಿಂದಲೇ
ಆತ ವಾಲ್ಮೀಕಿ ಋಷಿಯಾದ. ಬಹುಶಹ ಪ್ರಕೃತಿಯ ಆಗುಹೋಗುಗಳು ಮತ್ತು ತನ್ನ ಸಂಬಂಧದಲ್ಲಿನ ಅರ್ಥವನ್ನು ಮತ್ತು ಅದರೊಂದಿಗೆ ಹೊಂದಿರುವ ತಾದಾತ್ಮ್ಯದ ಅನರ್ಥವನ್ನು ನಿಚ್ಚಳವಾಗಿ ಕಾಣಬೇಕಿದ್ದರೆ, ಪ್ರಕೃತಿಯು ತನ್ನದೇ ರೀತಿಯಲ್ಲಿ ಪೆಟ್ಟುಗಳೆಂಬ ಪಟ್ಟುಗಳನ್ನು ಪ್ರಯೋಗಿಸಬೇಕೋ ಏನೋ.
ಮನುಷ್ಯನು ಅಧರ್ಮದ ಹಾದಿಯನ್ನು ತುಳಿದಾಗ ಮಾನವ ಸಮೂಹವನ್ನೇ ನಾಶಮಾಡುವ ಪ್ರಕೃತಿ ವಿಕೋಪಗಳನ್ನು, ಆಯುರ್ವೇದದಲ್ಲಿ ಜನಪದೋಧ್ವಂಸ ಎಂದು ವಿಶ್ಲೇಷಿಸಿರುವಂತೆ, ” ರುದ್ರ “ವನ್ನು ಕಾಣಿಸುವುದು ಕೂಡ ಪ್ರಕೃತಿಯು ನಮ್ಮನ್ನು ಸತ್ಯದ ಕಡೆಗೆ ಮುಖ ಮಾಡಿಸುವ ಒಂದು ಪ್ರಕ್ರಿಯೆ,ಬಗೆ. ಶಾಪ ಎಂಬಂತೆ ಕಾಣುವ ಒಂದು ವರ.! ಅಂದರೆ” ರುದ್ರ “ರೂಪದ ಪ್ರಕೃತಿಯ ಒಂದು ಅನುಗ್ರಹ.
ಮೃತ್ಯುವಿನ ರೌದ್ರವೂ ನಚಿಕೇತನನ್ನು ಜ್ಞಾನದ ಕಡೆಗೆ ಕೊಂಡೊಯ್ದು ಅನುಗ್ರಹಿಸಿದ ಕರುಣೆ. ಸತ್ಯ ಅರ್ಥವಾಗಬೇಕಾದರೆ ಮತ್ತೆ ಮರಳ ಬೇಕಾದುದು ಉಪನಿಷತ್ತಿನ ಕಾಲಕ್ಕೆ.
ಜಗತ್ತಿನ ಸತ್ಯ ” ವಿಪತ್ತು”., ಅಂತಿಮವಾಗಿ.
ವಿಪತ್ತಿನ ಸತ್ಯವನ್ನು ತಿಳಿದರೆ , ಜಗತ್ತಿನ ಸತ್ಯವನ್ನು ತಿಳಿದಂತೆ.
ಅತಿ ದೊಡ್ಡ ವಿಪತ್ತು ಎಂದರೇನು?ಮೃತ್ಯು.
ಅಂದರೆ, ಮೃತ್ಯು ಎಂದರೆ ವಿಪತ್ತಿನ ಕೊನೆ!
ಮೃತ್ಯುವನ್ನು ತಿಳಿಯುವುದೆಂದರೆ, ಅದು ಜ್ಞಾನದ ಮೊನೆ., ಮೊನಚಾದ ಬುದ್ಧಿ.
ಬುದ್ಧನಿಗೆ ತಾನು ಕಂಡ ಮೃತ್ಯು ,ವಿಪತ್ತು ಅಷ್ಟರವರೆಗೆ ನಂಬಿದ ನಂಬಿಕೆಗೆ ನಡುಕ ಹುಟ್ಟಿಸಿ, ಮತ್ತೊಂದರ ಕಡೆಗಿನ ಪಯಣ ಆರಂಭವಾಯಿತು.
ಹಾಗೆ ಆದಾಗಲೇ ನಮಗೆ -” ಸ್ತುವನ್ ನಾಮ ಸಹಸ್ರೇಣ ಜ್ವರಾನ್ ಸರ್ವಾನ್ ವ್ಯಪೋಹತಿ “, ಅಂದರೆ “ವಿಷ್ಣುಸಹಸ್ರನಾಮದ ಶ್ರದ್ದಾ ಭಕ್ತಿಪೂರ್ವಕ ಅನುಸಂಧಾನದಿಂದ ಎಲ್ಲಾ ಜ್ವರಗಳು ಕೂಡ ಗುಣ ಹೊಂದುತ್ತವೆ” ಎಂಬ ಮಾತಿನ ಅಂತರಾರ್ಥ ಅರ್ಥ ಆಗುವುದು ಸಾಧ್ಯ.
” ಜ್ವರ” ಎಂದರೆ ಮರಣ ಜ್ವರವನ್ನು ಕೂಡ ಜಯಿಸಬಹುದು ಎಂಬ ಅರ್ಥ ವ್ಯಾಪ್ತಿ.
ಜ್ವರ ಎಂದರೆ ” ಸಂತಾಪ “ತಾನೇ? ಆದುದರಿಂದ, ಆ ಮೂಲಕ ಸಂಸಾರ ಅಥವಾ ಸ್ಥೂಲ ಜಗತ್ತಿನ ತಾಪದಿಂದ ಪಾರಾಗುವ ಸೂಕ್ಷ್ಮವನ್ನು ಇದು ಹೇಳುತ್ತದೆ.