ಯೋಗವೆಂದರೆ ವಿಕಾಸ- ವಿಸ್ತಾರ
———————————————–
ಸಮುದ್ರವನ್ನು ಲಂಘಿಸುವುದಕ್ಕೆ ಅಗಾಧವಾಗಿ ಬೆಳೆದವ ಹನುಮಂತ.
ಸಮುದ್ರಲಂಘನಕ್ಕೆ ಮುನ್ನ, ಅಂತಹ ಸಾಮರ್ಥ್ಯದ ಅರಿವಿದ್ದೂ ಕೂಡ , ಅದರ ಅರಿವೇ ಇಲ್ಲದಂತೆ ವಿನೀತನಾಗಿ ಸಮುದ್ರದ ದಂಡೆಯ ಮೇಲೆ ಕುಳಿತಿದ್ದ ಹನುಮಂತ.
ಪ್ರತಿಯೊಂದು ಜೀವದ ವಿಕಸನ ಹೊಂದುವ ಸಾಮರ್ಥ್ಯಕ್ಕೆ ಉದಾಹರಣೆಯಾಗಿ ನಿಲ್ಲುವವ ಹನುಮಂತ.
ಹನುಮಂತನೆಂದರೆ ರಾಮನ ಬಳಿಗೆ ನಮ್ಮನ್ನು ಒಯ್ಯಬಲ್ಲ ರಾಮಸೇತು. ಸೇತುವೆ ಎಂದರೆ ಹಾಗೆಯೇ ತಾನೇ? ಈ ದಡಕ್ಕೂ ಆಚೆಯ ದಡಕ್ಕೂ ಸಂಪರ್ಕ ಕಲ್ಪಿಸಬಲ್ಲ ಮತ್ತು ದಾಟಿಸಬಲ್ಲ ಸಾಧ್ಯತೆಯನ್ನು ಹೊಂದಿರುವುದು. ಆದುದರಿಂದ ರಾಮನ ಬಳಿಗೆ ಹೋಗಬೇಕಾದರೆ ಹನುಮಂತನು ಮೊದಲ ಮಾರ್ಗದರ್ಶಿ. ಭಗವಂತನ ಸಾಕಾರ ಪ್ರಪಂಚದ ಕಾರ್ಯದರ್ಶಿ. ಭಕ್ತನೆಂದರೆ ಯಾವ ರೀತಿ ಇರಬೇಕೆಂಬುದನ್ನು ತೋರಿಸಿಕೊಟ್ಟ ಮಾದರಿ ರೂಪ ಹನುಮಂತ. ಹನುಮಂತ ಎಂದರೆ ಧರ್ಮದ ಶಕ್ತಿಯ ಪ್ರತೀಕ. ಎಷ್ಟರಮಟ್ಟಿಗೆ ಎಂದರೆ, ಭಗವಂತನಿಗಾಗಿ ಧರ್ಮಕ್ಕಾಗಿ ಎಷ್ಟು ಸಾಹಸಿ ಯಾಗಬಹುದು ಎಂಬುದನ್ನು ತೋರಿಸಿಕೊಟ್ಟವ. ಭಕ್ತ ನೆಂದರೆ ಬರೀ ಭಜನೆ ಮಾಡುವವನು ಮಾತ್ರವಲ್ಲ, ಅಧರ್ಮದ ವಿರುದ್ಧ ಸೆಟೆದು ನಿಲ್ಲಬಲ್ಲ ಕ್ಷಾತ್ರ ತೇಜ ಎಂದು ತೋರಿಸಿಕೊಟ್ಟವ. ಶ್ರೀರಾಮನ ಭಕ್ತರ ಶಕ್ತಿ ಎಷ್ಟು ಎಂದು ಜಗತ್ತಿಗೆ ತೋರಿಸುವುದಕ್ಕೆ ಹನುಮಂತ ಒಬ್ಬ ಸಾಕು.” ನಿಮ್ಮ ಬಾಲಕ್ಕೆ ಬೆಂಕಿ ಕೊಡಬೇಕು” ಎಂದು ಯಾರೇ ಆದರೂ ನಮ್ಮ ಮೇಲೆ ಸಿಟ್ಟಿನಿಂದ ಹೇಳಿದರೂ, ಆಗ ನಾವು -” ಆಗಬಹುದು. ಆದರೆ ನೀವು ಬೆಂಕಿ ಕೊಡುವ ಬಾಲ ಹನುಮಂತನ ಬಾಲ ಆಗಿದ್ದಲ್ಲಿ…” ಎಂದು ಎಚ್ಚರಿಕೆ ಕೊಡುವಷ್ಟು ಹನುಮಂತ ಹಾಸುಹೊಕ್ಕಾಗಿ ಇದ್ದಾನೆ.
ಭಕ್ತಿಗೆ ಪ್ರಾಣ ಕೊಡುವವ ಹನುಮಂತ, ಮುಕ್ತಿಗೆ ತ್ರಾಣ ಕೊಡುವವ ಹನುಮಂತ.” ಬಾಷ್ಪ ವಾರಿ ಪರಿಪೂರ್ಣ ಲೋಚನಂ”- ಬೇರಾವುದಕ್ಕೂ ಅಲ್ಲ, ಶ್ರೀರಾಮನ ಹೆಸರು ಕೇಳಿದಾಗ ಮಾತ್ರ ಆನಂದದ ಕಣ್ಣೀರು ಸುರಿಸುವವ ಹನುಮಂತ. ಇದಕ್ಕಿಂತ ಚೆನ್ನಾಗಿ ಹನುಮಂತನನ್ನು ಚಿತ್ರಿಸುವುದು ಸಾಧ್ಯವಿಲ್ಲ.” ಮನೋಜವಂ ಮಾರುತತುಲ್ಯವೇಗಂ” ಎಂಬುದಾಗಿ ಹೇಳಿದ್ದರೂ , ಆ ವೇಗವು ಶ್ರೀರಾಮನ ದಾಸ್ಯದಿಂದ ಪಡೆದದ್ದು ಎಂಬುದು ಹನುಮಂತನಿಗೆ ಚೆನ್ನಾಗಿ ಗೊತ್ತು. ಇದು ಜ್ಞಾನ.
ತನಗೆ ಕೊಟ್ಟ ರತ್ನದ ಹಾರದಲ್ಲಿ ಒಂದೊಂದೇ ರತ್ನವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಅದರಲ್ಲಿ ಶ್ರೀರಾಮ ಕಾಣಿಸಲಿಲ್ಲವೆಂದು , ಹಾರವನ್ನು ಎಸೆದವನು ಹನುಮಂತ. ಯಾವುದೇ ರತ್ನ ಕೂಡ ಶ್ರೀ ರಾಮನಿಗಿಂತ ಬೆಲೆಯುಳ್ಳದ್ದು ಅಲ್ಲ ಎಂಬ ಅಚಲ ಶ್ರದ್ಧೆ ಆತನದ್ದು.
ರಾಮನನ್ನು ಬಿಟ್ಟು ಹನುಮಂತನನ್ನು, ಹನುಮಂತನನ್ನು ಬಿಟ್ಟು ಶ್ರೀರಾಮನನ್ನು ಕುರಿತು ಚಿಂತಿಸುವುದು ಭಾರತದ ಮಣ್ಣಿನಲ್ಲಿ ಜನಿಸಿದ ಯಾವೊಬ್ಬನಿಗೂ ಸಾಧ್ಯವಿಲ್ಲ.
ಇಂದು ಮಾನವನ ಜೀವನವು ಡೋಲಾಯಮಾನವಾಗಿದೆ. ಕಾಲ ಪ್ರವಾಹದಿಂದ ಹೊರಗಿಟ್ಟು, ಕೇವಲ ಒಂದೇ ಚೌಕಟ್ಟಿನಲ್ಲಿ ಜೀವನವನ್ನು ನೋಡುವುದು ಅಸಾಧ್ಯವಾಗಿದೆ. ಪ್ರತಿನಿತ್ಯ ನೂತನ ಆರಂಭದ ಸಂದರ್ಭಗಳನ್ನು ಬದುಕು ಒದಗಿಸುತ್ತದೆ. ಕಳೆದದ್ದಕ್ಕೆ ಅಂಟಿಕೊಳ್ಳುವುದು ಸಮಂಜಸವಲ್ಲ. ಗಡಿಯಾರವನ್ನು ಹಿಂದಕ್ಕೆ ತಿರುಗಿಸಿ, ಬದುಕಿನ ಕಳೆದ ಘಟನೆಗಳನ್ನು ಅಳಿಸುವಂತೆ ಮಾಡುವುದು ಸಾಧ್ಯವಿಲ್ಲ. ನಮ್ಮನ್ನು ಅಳಿಸಿದ ಘಟನೆಗಳ ನೆನಪುಗಳನ್ನು ಅಳಿಸುವುದು ಸಾಧ್ಯವಿಲ್ಲ. ಆದರೆ ನಿತ್ಯವೂ, ಗೊತ್ತಿದ್ದೋ ಗೊತ್ತಿಲ್ಲದೆಯೋ, ನಾವು ಮಾಡಿದ ತಪ್ಪುಗಳ ಕಾರಣವನ್ನು ಅಂತರೀಕ್ಷ ಣೆ ಮತ್ತು ಸಿಂಹಾವಲೋಕನದ ಮೂಲಕ ಮಾಡಿಕೊಳ್ಳುವುದಷ್ಟೇ ನಮ್ಮಿಂದ ಸಾಧ್ಯ. ಮತ್ತೆ ತಪ್ಪುಗಳು ಮರುಕಳಿಸದಂತೆ ತೀವ್ರ ಪಶ್ಚಾತಾಪದ ಸಾಮರ್ಥ್ಯ ಇರುವುದು ಮನುಷ್ಯ ಜೀವಕ್ಕೆ ಮಾತ್ರ. ಬದುಕಿದ ವರ್ಷಗಳ ಲೆಕ್ಕಕ್ಕಿಂತ, ಬದುಕಿನ ಗುಣಾತ್ಮಕ ಮೌಲ್ಯಗಳ ಲೆಕ್ಕಕ್ಕೆ ಹೆಚ್ಚು ಬೆಲೆ ಎಂಬುದನ್ನು ಗ್ರೀಕ್ ತತ್ವಜ್ಞಾನಿ ಪ್ಲೇಟೋ ಬದುಕನ್ನು ವಿಶ್ಲೇಷಣೆ ಮಾಡುವಾಗ ಉಲ್ಲೇಖಿಸಿದ್ದಾನೆ. ಅವನು ಹೇಳುವ ಪ್ರಕಾರ, ತೃಪ್ತಿ ಹೊಂದಿದ ಪಶುವಿಗಿಂತ ಅತೃಪ್ತಿ ಹೊಂದಿರುವ ಮಾನವನಾಗಿ ಇರುವುದು ಹೆಚ್ಚು ಉತ್ತಮ. ಬಹುಶಹ ಮಾನವನ ಒಳಗಿನ ಅತೃಪ್ತಿಯೇ, ಅವನೊಳಗೆ ವಿಷಣ್ಣತೆ ಯನ್ನು ಹುಟ್ಟಿಸಿ, ಅಂತರಂಗದಲ್ಲಿ ಅನುಭವಿಸುವ ಆನಂದದ ಗುರಿ ಮುಟ್ಟುವುದಕ್ಕೆ ಮೆಟ್ಟಿಲಾಗುತ್ತದೆ ಎಂಬುದೇ ಆ ಮಾತಿನ ಭಾವ ಇರಬಹುದು. ತನ್ನ ಪರೆಯನ್ನು ಕಳಚದೆ ವಿಕಾಸವು ಸಾಧ್ಯವಿಲ್ಲ. ಒಂದು ಹಾವು ಕೂಡ ಆಗಾಗ ಪರೆಯನ್ನು ಕಳಚುತ್ತಲೇ ಇರುತ್ತದೆ.
ಹೊಸ ಪರೆಯು ಬೆಳೆಯುತ್ತದೆ. ದ್ವೇಷ, ವೈಮನಸ್ಯ, ದುರಾಸೆ, ಮತ್ಸರಗಳ ಪರೆ ಕಳಚಿ ವಿಶ್ವ ವಾತ್ಸಲ್ಯದ, ಭ್ರಾತೃತ್ವದ, ಸಹಾನುಭೂತಿಯ, ಧನಾತ್ಮಕ ಚಿಂತನೆಯ ಹೊಸ ರಕ್ಷಾಕವಚವನ್ನು ನಮ್ಮೊಳಗೆ ಸೃಷ್ಟಿಸಿಕೊಳ್ಳುವುದು ವಿಕಾಸದ ನಿಜವಾದ ಅರ್ಥ. ಆದರೆ ಬರಿಯ ಬಾಹ್ಯ ಸೌಂದರ್ಯವರ್ಧಕಗಳ, ಆಡಂಬರದ ವೈಭೋಗ ಗಳ ಬದಲಾವಣೆಯಿಂದ ಅದು ಸಾಧ್ಯ ಇಲ್ಲ. ಒಳಗಿನ ರಾಡಿಯನ್ನು ತುಂಬಿಕೊಂಡು ದೇವಳ ಸುತ್ತಿದರೆ ಏನು ಪ್ರಯೋಜನ? ನಮ್ಮೊಳಗಿನ ಆಂತರಿಕ ಜೀವಶಕ್ತಿ ನಮ್ಮ ದೈಹಿಕ ಸೆಲೆ ಯಾಗಲಿ. ಅದು ಸತ್ಯ, ಬೆಳಕಿಗೆ ನೆಲೆಯಾಗಲಿ. ಈ ದಾರಿಯಲ್ಲಿ ನಡೆಯುವವರು ಇತರರಿಗೂ ಮಾದರಿಯಾಗಬಲ್ಲರು ಹಾಗೂ ತಮ್ಮೊಳಗೆ ಆನಂದದ ನೆಲೆಯಾಗ ಬಲ್ಲರು.
ಚಿರಂಜೀವಿತ್ವ ಹನುಮಂತನಿಗೆ ಅಯಾಚಿತವಾಗಿ ಬಂದದ್ದು. ಆದರೆ ಆ ಚಿರಂಜೀವಿತ್ವದಲ್ಲಿ ಕಾಣುವ ಸುಖಕ್ಕಿಂತ, ಹನುಮಂತನಿಗೆ ರಾಮನ ಸೇವಕ ತ್ವದಲ್ಲಿ ಪರಿಪೂರ್ಣ ಆನಂದ. ವಿಕಾಸ ವೆಂದರೆ ಇದುವೇ ಅಲ್ಲವೇ? ಫಲಕ್ಕಿಂತ, ಫಲದ ಭಾರ ಕ್ಕಿಂತ , ಕರ್ತವ್ಯ ರೂಪದಲ್ಲಿ ಕರ್ಮ ಮಾಡುವುದರಲ್ಲಿ ಸಂತಸಪಡುವ ಮನೋಧರ್ಮ. ಆಗ, ವಿಕಾಸ ವೆಂದರೆ, ಅಂಗೈಯಲ್ಲಿ ನೆಲ್ಲಿಕಾಯಿ ಇದ್ದಂತೆ.
( ಈ ಜಾಲತಾಣವು ಆಯುರ್ವೇದಕ್ಕೆ ಮಾತ್ರ ಸೀಮಿತವಾಗಿರದೆ ಯೋಗಕ್ಕೂ ಸಂಬಂಧಪಟ್ಟದ್ದು ಆದ್ದರಿಂದ ಈ ಬರಹ ಪ್ರಸ್ತುತವೆಂದು ಭಾವಿಸುತ್ತೇನೆ)
ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ
B. A. M. S., D. Pharm., M. S. (Ayu).
ಆಯುರ್ವೇದತಜ್ಞ ವೈದ್ಯರು ಹಾಗೂ ಚಿಂತಕರು
ಪ್ರಸಾದಿನೀ ಆಯುರ್ನಿಕೇತನ, ನರಿಮೊಗರು, ಪುತ್ತೂರು.
ಹಾಗೂ
ಅಸಿಸ್ಟೆಂಟ್ ಪ್ರೊಫೆಸರ್
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಸುಳ್ಯ.