ನಿಮ್ಮ ಮೆದುಳಿಗೆ ಆಹಾರದ ಅಭ್ಯಾಸಗಳು
—————————_—————————-
ಆನೆಯ ಮೆದುಳು 7500 ಗ್ರಾಂ, ನಮ್ಮ ಮೆದುಳು ಸಾವಿರದ ನಾನೂರು ಗ್ರಾಂ ತೂಕ ಇರುತ್ತದೆ. ಆನೆಯ ಮೆದುಳಿನ ತೂಕದ ಎಷ್ಟೋ ಪಾಲು ಕಡಿಮೆ. ಆದರೆ ಆಲೋಚಿಸಬೇಕಾದ ಅಂಶವೆಂದರೆ ಅದರ ಮೆದುಳಿನ ತೂಕ, ದೇಹದ ತೂಕದ1/550 ರಷ್ಟು ಇದೆ. ನಮ್ಮ ಮೆದುಳು ನಮ್ಮ ದೇಹದ ತೂಕದ1/40 ರಷ್ಟು ಇದೆ.ಆದುದರಿಂದ ಮೆದುಳಿನ ತೂಕವನ್ನು ಆಧರಿಸಿ ಬುದ್ಧಿಸಾಮರ್ಥ್ಯವನ್ನು ನಿರ್ಣಯಿಸಬೇಕಾದ ಅಗತ್ಯವಿಲ್ಲ. ಮೆದುಳಿನ ಮತ್ತು ದೇಹದ ತೂಕದ ಅನುಪಾತಗಳು ಬೌದ್ಧಿಕ ಸಾಮರ್ಥ್ಯವನ್ನು ತೀರ್ಮಾನಿಸುವ ಮಾನದಂಡ ಆಗಿರುತ್ತದೆ.
ನಮ್ಮ ಮೆದುಳು ನಮ್ಮ ದೇಹ ತೂಕದ 2.5 ರಷ್ಟು ತೂಕವಿದೆ. ಆದರೆ ಶರೀರದ ಶಕ್ತಿ ವ್ಯಯದ 22 ರಷ್ಟನ್ನು ವಿಶ್ರಾಂತಿಯಲ್ಲಿ ಮೆದುಳು ವ್ಯಯ ಮಾಡುತ್ತದೆ. ಚಿಂಪಾಂಜಿ ಮತ್ತು ಗೊರಿಲ್ಲಾಗಳ ಮೆದುಳಿಗಿಂತ 350 ಶೇಕಡಾದಷ್ಟು ಹೆಚ್ಚು ಶಕ್ತಿಯನ್ನು ಮಾನವನ ಮೆದುಳು ವ್ಯಯಿಸುತ್ತದೆ. ಮಿದುಳಿನ ಅದ್ಭುತ ಸಾಮರ್ಥ್ಯಗಳನ್ನು ಅರ್ಥ ಮಾಡಿಕೊಂಡಲ್ಲಿ, ನಮ್ಮ ಆರೋಗ್ಯ ಹಾಗೂ ಮೆದುಳಿನ ಕ್ರಿಯಾಶೀಲತೆಗೆ ದಾರಿಮಾಡಿ ಕೊಡಬಲ್ಲ ಸಾಧನವಾದ ಆಹಾರವಿಧಾನಗಳನ್ನು ತೋರಿಸಿ ಕೊಡಬಲ್ಲದು.
ಉಪವಾಸದ ಸಾಮರ್ಥ್ಯ:
———————————–
ಹಸಿವಿನ ಸಂದರ್ಭದಲ್ಲಿ ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸಬಲ್ಲ ಕಾರ್ಯವೈಖರಿ ಮನುಷ್ಯ ದೇಹದಲ್ಲಿದೆ. ಕೊಬ್ಬು ಕೀಟೋನ್ ಅಣುಗಳಾಗಿ ವಿಶಿಷ್ಟವಾಗಿ ವಿಭಜಿತ ಗೊಳ್ಳುವುದು. ಬೀಟಾಹೈಡ್ರಾಕ್ಸಿ ಬ್ಯೂಟಿ ರೇಟ್ ಇವುಗಳಲ್ಲಿ ಒಂದು. ಇದು ಮಿದುಳಿಗೆ ಅತ್ಯುತ್ಕೃಷ್ಟವಾದ ಇಂಧನ. ಮಧ್ಯಂತರದ ಉಪವಾಸ ಗಳಿಂದ ಸಿಗುವ ಪ್ರಯೋಜನಗಳಿಗೆ ಇದು ಉತ್ತರವಾಗಿರುತ್ತದೆ. ಇತರ ಸಸ್ತನಿ ಜೀವಿಗಳಿಗಿಂತ ಭಿನ್ನವಾಗಿ , ಮಾನವನ ಮೆದುಳು ಉಪವಾಸದ ಸಂದರ್ಭದಲ್ಲಿ ಶಕ್ತಿಯ ಪರ್ಯಾಯ ಮೂಲಗಳನ್ನು ಕಂಡುಕೊಳ್ಳುವುದು. ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿನ ಗ್ಲುಕೋಸ್, ಶಕ್ತಿ ಪೂರೈಸುವ ಮೆದುಳಿನ ಮುಖ್ಯ ಇಂಧನ. ಎರಡು ಭೋಜನದ ನಡುವಿನ ಅವಧಿಯಲ್ಲಿ, ನಮ್ಮ ಮಿದುಳಿಗೆ ನಿರಂತರವಾಗಿ ಗ್ಲೂಕೋಸ್ ಸರಬರಾಜು ಆಗುತ್ತಿರುತ್ತದೆ. ಇದು ಲಿವರ್ ಮತ್ತು ಮಾಂಸ ಕೋಶಗಳಲ್ಲಿ ನ ಗ್ಲೈಕೋಜನ್ ಅಂಶದಿಂದ ಬರುವಂತದ್ದು. ದೇಹದಲ್ಲಿನ ಗ್ಲೈಕೋಜನ್ ಸಂಗ್ರಹ ಮುಗಿದನಂತರ ಅಮಿನೋ ಆಸಿಡ್ ಗಳು ಗ್ಲುಕೋಸ್ ಅಂಶವನ್ನು ಒದಗಿಸುವ ಮೂಲ ಗಳಾಗಿರುತ್ತವೆ. ಇದಕ್ಕೆ ಬಳಕೆ ಯಾಗುವ ಅಮೈನೋ ಆಮ್ಲಗಳು ಮಾಂಸಖಂಡಗಳಲ್ಲಿ ಇರುತ್ತವೆ. ಆದಕಾರಣ ಈ ಪ್ರಕ್ರಿಯೆಯಲ್ಲಿ ಮಾಂಸ ಖಂಡಗಳ ತ್ಯಾಗ ಒಳಗೊಳ್ಳುತ್ತದೆ. ಆದ್ದರಿಂದ ಇದು ಅಪೇಕ್ಷಣೀಯ ಸಂಗತಿ ಅಲ್ಲ.
ಅದೃಷ್ಟವಶಾತ್, ಮಾನವನ ಶರೀರ ಕ್ರಿಯೆಯು ಮೆದುಳಿಗೆ ಶಕ್ತಿ ನೀಡುವ ಇನ್ನೊಂದು ಮಾರ್ಗ ವಾಹಿನಿಯನ್ನು ಒಳಗೊಂಡಿದೆ. ಹೆಚ್ಚಿನ ಅವಧಿಗೆ ಆಹಾರ ಲಭ್ಯವಾಗದ ಸಂದರ್ಭದಲ್ಲಿ ಅಂದಾಜು ಮೂರು ದಿನಗಳ ಅನಂತರ ಕೀಟೋನ್ ಗಳ ಸೃಷ್ಟಿಗೆ ಲಿವರ್ ದೇಹದಲ್ಲಿನ ಕೊಬ್ಬನ್ನು ಬಳಸುವುದಕ್ಕೆ ಆರಂಭಿಸುತ್ತದೆ. ಆಹಾರದ ಕೊರತೆಯ ಈ ಸಂದರ್ಭದಲ್ಲಿ ಬೀಟಾ ಹೈಡ್ರಾಕ್ಸಿ ಬ್ಯೂಟಿರೇಟ್ ಎಂಬ ಅಂಶವು ಮೆದುಳಿಗೆ ಸಮರ್ಥ ಇಂಧನ ಮೂಲವಾಗಿ ಒದಗಿ ಬರುವಂಥದ್ದು. ಈ ರೀತಿಯ ಪರ್ಯಾಯ ಇಂಧನ ಮೂಲ, ಗ್ಲುಕೋಸ್ ಎಂಬ ಇಂಧನಕ್ಕೆ ಅವಲಂಬಿತವಾಗುವ ಅನಿವಾರ್ಯತೆಯನ್ನು ತಪ್ಪಿಸಿ ನಮ್ಮ ಮಾಂಸಪೇಶಿಗಳ ನ್ನು ಉಳಿಸುತ್ತದೆ.
ಇದೆಲ್ಲಕ್ಕೂ ಮಿಗಿಲಾಗಿ, ಹಾರ್ವರ್ಡ್ ವಿದ್ಯಾಲಯದ ಪ್ರೊಫೆಸರ್ ಚಾರ್ಜ್ .ಎಫ್ .ಕಹಿಲ್ ಹೇಳಿದ್ದರು-” ಬೀಟಾ ಹೈಡ್ರಾಕ್ಸಿಬ್ಯೂಟಿರೇಟ್ ಎಂಬುದು ಒಂದು ಕೇವಲ ಇಂಧನ ವಲ್ಲ, ಅದು ಅತ್ಯುತ್ಕೃಷ್ಟ ಇಂಧನ.
ಅತ್ಯಂತ ಸಮರ್ಥ ರೀತಿಯಲ್ಲಿ ಗ್ಲುಕೋಸ್ ಗಿಂತಲೂ ಹೆಚ್ಚಾಗಿ ಎ.ಟಿ.ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಜಿಮರ್ ಹಾಗೂ ಪಾರ್ಕಿನ್ ಸನ್ ಕಾಯಿಲೆಗಳಿಗೆ ಕಾರಣವಾಗುವ ವಿಷಕಾರಿ ಅಂಶಗಳಿಂದ ಕೋಶಗಳನ್ನು ರಕ್ಷಿಸುತ್ತದೆ.” ಇಂಥ ಈ ಬೀಟಾ ಹೈಡ್ರಾಕ್ಸಿ ಬ್ಯುಟಿರೇಟ್ ಅಂಶವನ್ನು ಪಡೆಯುವುದು ಅತ್ಯಂತ ಸುಲಭ. ತೆಂಗಿನೆಣ್ಣೆಯನ್ನು ನಿಮ್ಮ ಆಹಾರಕ್ಕೆ ಸೇರಿಸಿದರೆ ಸಾಕು, ಅಷ್ಟೇ. ಆಂಟಿ ಆಕ್ಸಿಡೆಂಟ್ ಕ್ರಿಯೆ ಉತ್ತಮಗೊಂಡು, ಶಕ್ತಿ ಉತ್ಪಾದಿಸುವ ಮೈಟೋಕಾಂಡ್ರಿಯಾ ಗಳ ಸಂಖ್ಯೆ ಕೂಡ ಕೋಶಗಳಲ್ಲಿ ಹೆಚ್ಚುವುದು.
ಸಂಶೋಧನೆಗಳು ಕೆಲವೊಂದು ಅಂಶಗಳನ್ನು ಪ್ರಮಾಣೀಕರಿಸಿದೆ. ನಮ್ಮ ದೇಹದ ಆರೋಗ್ಯದಾಯಕ ಹಾಗೂ ಮೆದುಳಿನ ಸಹಜ ರಕ್ಷಕ ವ್ಯವಸ್ಥೆಯು ಉಪವಾಸದಿಂದ ಚುರುಕುಗೊಳ್ಳುತ್ತದೆ. ಸಾವಿರದ ಒಂಬೈನೂರ ರಲ್ಲಿ ವೈದ್ಯರು ಸಕ್ಕರೆ ಕಾಯಿಲೆಗೆ, ಬೊಜ್ಜು ಹಾಗೂ ಅಪಸ್ಮಾರ ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಉಪವಾಸವನ್ನು ಸೂಚಿಸುತ್ತಿದ್ದರು. ಇಂದು ಉಪವಾಸದಿಂದ ಆಯುಷ್ಯ ಹೆಚ್ಚುತ್ತದೆ.: ಕಾಯಿಲೆ ನಿಯಂತ್ರಣಗೊಳ್ಳುತ್ತದೆ,: ಡಿಮೆನ್ಶಿಯ ಹಾಗೂ ಕ್ಯಾನ್ಸರ್ ಗಳನ್ನು ದೂರವಿಡುತ್ತದೆ:- ಎಂಬಿತ್ಯಾದಿ ಅಂಶಗಳು ಸಾಬೀತುಗೊಂಡಿದೆ.
ವಂಶವಾಹಿಗಳಲ್ಲಿ ಬಿ. ಡಿ .ಎನ್. ಎಫ್. ( ಬ್ರೈನ್ ಡಿವಲಪ್ಮೆಂಟ್ ನ್ಯೂರೋನಲ್ ಫ್ಯಾಕ್ಟರ್) ಉತ್ಪಾದನೆಗೆ ಉಪವಾಸವು ಉತ್ತೇಜಿಸುತ್ತದೆ.ಎನ್.ಆರ್.ಎಫ್.2 ಮಾರ್ಗ ವಾಹಿಯನ್ನು ಬಲ ಗೊಳಿಸುವುದರ ಮೂಲಕ ವಿಷಕಾರಿ ಅಂಶಗಳನ್ನು ಶರೀರದಿಂದ ಹೊರಹಾಕುವುದು, ಉರಿಯೂತ ಕಡಿಮೆ ಮಾಡುವುದು, ಮೆದುಳಿನ ರಕ್ಷಕ ಜಾಡಮಾಲಿ ಗಳನ್ನು ಉತ್ಪಾದಿಸುವುದು ಇತ್ಯಾದಿ ಕಾರ್ಯಗಳನ್ನು ಮಾಡುತ್ತದೆ.
ಉಪವಾಸದಿಂದ ಮೆದುಳು ತನ್ನ ಕಾರ್ಯಚಟುವಟಿಕೆಗಳಿಗೆ ಗ್ಲೂಕೋಸನ್ನು ಇಂಧನವಾಗಿ ಉಪಯೋಗಿಸುವ ಬದಲಿಗೆ , ಲಿವರ್ ನಲ್ಲಿ ಉತ್ಪಾದನೆಯಾದ ಕೀಟೋನ್ ಅಂಶಗಳನ್ನು ಬಳಸುವುದಕ್ಕೆ ತೊಡಗುತ್ತದೆ. ಹೀಗೆ, ಮೆದುಳು ಕೀಟೋನ್ ಅಂಶಗಳಿಂದ ಚಯಾಪಚಯ ಕ್ರಿಯೆ ನಡೆಸುತ್ತಿರುವಾಗ, ಕೋಶಗಳ ಸ್ವ ಹತ್ಯೆಯು ಕಡಿಮೆಯಾಗುತ್ತದೆ. ಮೈಟೋಕಾಂಡ್ರಿಯಾ ಗಳ ಸಂಖ್ಯೆ ಹೆಚ್ಚಿಸಲು ಕೋಶಗಳ ವಂಶವಾಹಿಗಳು ಕ್ರಿಯಾಶೀಲ ಗೊಳ್ಳುತ್ತವೆ. ಸರಳವಾಗಿ ಹೇಳುವುದಾದರೆ ಉಪವಾಸವು ಶಕ್ತಿಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೂ ಮೆದುಳಿನ ಉತ್ತಮ ಕಾರ್ಯ ಸಾಮರ್ಥ್ಯಕ್ಕೆ ಬುನಾದಿಯಾಗುತ್ತದೆ.
ಹೆಚ್ಚಿನ ಎಲ್ಲಾ ಧರ್ಮಗಳಲ್ಲೂ ಹಬ್ಬದ ಸಂಭ್ರಮಕ್ಕಿಂತ ಉಪವಾಸಕ್ಕೆ ಹೆಚ್ಚಿನ ಆದ್ಯತೆ, ಪಾವಿತ್ರ್ಯ ನೀಡಿದೆ. ಆಧ್ಯಾತ್ಮಿಕದ ಪ್ರಾಥಮಿಕ ಅಭ್ಯಾಸಕ್ಕೆ ಉಪವಾಸವನ್ನು ಸೂಚಿಸುತ್ತದೆ. ಮಹಾತ್ಮಗಾಂಧಿಯವರು ಕೂಡ ಆರೋಗ್ಯ ಹಾಗೂ ಮನಸ್ಸಿಗೆ ಸಂಬಂಧಿಸಿ ಉಪವಾಸವನ್ನು ಒಂದು ವ್ರತವಾಗಿ ಸೂಚಿಸಿದ್ದರು.
ಹಾಗಾದರೆ ಕಾರ್ಬೋಹೈಡ್ರೇಟ್ ಅಥವಾ ಪಿಷ್ಠ ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಿ ಕೊಬ್ಬಿನಿಂದ ಕ್ಯಾಲರಿ( ಶಕ್ತಿ) ಪಡೆಯುವ ವಿಧಾನವನ್ನು ಆಯ್ದುಕೊಂಡರೆ ಏನಾಗುತ್ತದೆ? ಉಪವಾಸದ ಸಂದರ್ಭದಲ್ಲಿ ಆಗುವಂತೆ ಮೆದುಳು ತನ್ನ ಶಕ್ತಿಗಾಗಿ ಕೊಬ್ಬಿನಿಂದ ಒದಗುವ ಕೀಟೋನ್ ಗಳನ್ನು ಆಕರವನ್ನಾಗಿ ಮಾಡಿಕೊಳ್ಳುತ್ತದೆ. ಇದು ನಮ್ಮ ಆಹಾರ ಸೇವನೆಯಲ್ಲಿ ಆರಂಭಿಕ ಸೂತ್ರಕ್ಕೆ ಅಡಿಪಾಯ ಆಗಿರಬೇಕು.
ಕಾರ್ಬೋಹೈಡ್ರೇಟ್ಸ್ ಸೇವನೆಯು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ತತ್ಪರಿಣಾಮ ದೇಹದಲ್ಲಿ ಕೊಬ್ಬಿನ ಉತ್ಪಾದನೆ, ಶೇಖರಣೆಯು ಹೆಚ್ಚುತ್ತದೆ. ಕೊಬ್ಬನ್ನು ಕರಗಿಸುವ ಸಾಮರ್ಥ್ಯ ಕುಗ್ಗುತ್ತದೆ. ಹೆಚ್ಚಿಗೆ ಇನ್ನೇನು ಹೇಳಬೇಕು? ಕಾರ್ಬೋಹೈಡ್ರೇಟ್ ಸೇವಿಸುತ್ತಿರುವಂತೆಯೇ ಲಿಪೊಪ್ರೋಟೀನ್ ಲೈಪೇಸ್ ಎಂಬ ಕಿಣ್ವವನ್ನು ಪ್ರಚೋದಿಸುತ್ತದೆ. ಅದು ಕೊಬ್ಬನ್ನು ಕೋಶಗಳ ಒಳಗೆ ತಳ್ಳುತ್ತದೆ. ಪಿಷ್ಠವನ್ನು ಸೇವಿಸುವಾಗ ಬಿಡುಗಡೆಯಾಗುವ ಇನ್ಸುಲಿನ್, ಕೊಬ್ಬನ್ನು ಕೋಶಗಳ ಒಳಗೆ ಬಂದಿಯಾಗಿಸುವ ಕಿಣ್ವಗಳನ್ನು ಪ್ರಚೋದಿಸುವುದರ ಮೂಲಕ ಪರಿಸ್ಥಿತಿಯನ್ನು ಹದಗೆಡಿಸುತ್ತದೆ.
ಕೊಬ್ಬನ್ನು ನಮ್ಮ ದೇಹದಲ್ಲಿ ಕರಗಿಸುವ ಹಂತದಲ್ಲಿ ದೇಹವು ಕೀಟೋಸಿಸ್ ಎಂಬ ಸ್ಥಿತಿಗೆ ಒಳಪಡುತ್ತದೆ. ಆದರೆ ಇದರೊಂದಿಗೆ ಸೆಣಸುವ ದೇಹದ ಸಾಮರ್ಥ್ಯವು ಮಾನವ ಭೂಮಿಗೆ ಬಂದಾಗಿನಿಂದ ದೇಹದಲ್ಲಿ ಅಂತರ್ಗತವಾಗಿದೆ. ಸಣ್ಣ ಪ್ರಮಾಣದ ಕೀಟೋಸಿಸ್ ನಮ್ಮನ್ನು ಆರೋಗ್ಯದಲ್ಲಿ ಇಡುವುದು. ಬೆಳಗ್ಗೆ ಏಳುವಾಗ ತಕ್ಕಮಟ್ಟಿಗೆ ಕೀಟೋಸಿಸ್ ಗೆ ಒಳಗಾಗಿರುತ್ತೇವೆ. ಏಕೆಂದರೆ ನಮ್ಮ ಲಿವರ್ ದೇಹದ ಕೊಬ್ಬನ್ನು ಇಂಧನವಾಗಿ ಬಳಸಿಕೊಳ್ಳಲು ವ್ಯವಸ್ಥೆ ಮಾಡತೊಡಗುತ್ತದೆ. ಹೃದಯ ಮತ್ತು ಮೆದುಳು- ಈ ಎರಡು ಪ್ರಧಾನ ಅಂಗಗಳು ಕೀಟೋನ್ ಗಳ ಶಕ್ತಿಯಿಂದಾಗಿ ಚೆನ್ನಾಗಿ ಕೆಲಸಮಾಡುತ್ತವೆ, ರಕ್ತದಲ್ಲಿನ ಸಕ್ಕರೆ ಅಂಶದ ಶಕ್ತಿಗೆ ಹೋಲಿಸಿದರೆ. ಆಶ್ಚರ್ಯವೇನು ಗೊತ್ತೇ? ಮೆದುಳಿನ ಗಡ್ಡೆಗಳ ಕೋಶಗಳು ಗ್ಲುಕೋಸನ್ನು ಮಾತ್ರ ಇಂಧನವನ್ನಾಗಿ ಬಳಸಿಕೊಳ್ಳುತ್ತವೆ.! ಆದಕಾರಣ, ಡಾ. ಜಿಯುಲಿಯೋ ಜುಕೋಲಿ, ಎಂಬ ಪಿಟ್ಸ್ಬರ್ಗ್ ಸ್ಕೂಲ್ ಆಫ್ ಮೆಡಿಸಿನ್ ಇದರ ಪ್ರಾಧ್ಯಾಪಕರ ಪ್ರಕಾರ-” ಕೀಟೋನ್ ಜನಕ ಆಹಾರಗಳು ಇಂತಹ ತೀವ್ರಸ್ವರೂಪದ ಗ್ಲಿಯೊಬ್ಲಾಸ್ಟೊಮಾ ಎಮ್ ಮಿದುಳು ಗಡ್ಡೆಗಳಿಗೆ ಚಿಕಿತ್ಸೆ ನೀಡುವಾಗ ಪರಿಣಾಮಕಾರಿಯಾಗಬಹುದು” ಎಂದಿದ್ದಾರೆ, ಮತ್ತು ಅದಕ್ಕೆ ಪೂರಕವಾದ ಯಶಸ್ವಿ ಚಿಕಿತ್ಸಾ ವರದಿಗಳನ್ನು ಅವರು ನೀಡಿದ್ದಾರೆ.
ಕೀಟೋನ್ ಜನಕ ಆಹಾರದಲ್ಲಿ 80ರಿಂದ 90 ಶೇಕಡಾದಷ್ಟು ಕ್ಯಾಲರಿಗಳನ್ನು ದೇಹವು ಕೊಬ್ಬಿನಿಂದ ಪಡೆಯುವುದು. ಮಿಕ್ಕದ್ದನ್ನು ಮಾತ್ರ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ನಿಂದ ಪಡೆಯುವುದು. 1921 ರಲ್ಲಿ, ಮಾಯೋ ಕ್ಲಿನಿಕ್ ನ ರಸೆಲ್ ವೈಡರ್, ಕೀಟೋಜನಿಕ್ ಆಹಾರಪದ್ಧತಿಯನ್ನು ಅಭಿವೃದ್ಧಿಗೊಳಿಸಿದರು.1950 ರಲ್ಲಿ, ಮೀಡಿಯಂ ಚೈನ್ ಟ್ರೈಗ್ಲಿಸರೈಡ್ ಕುರಿತಾಗಿ ವಿವರಗಳು ಸಂಶೋಧನೆಗಳಿಂದ ತಿಳಿದು ಬಂದವು. ಅವುಗಳು ಬೀಟಾ ಹೈಡ್ರಾಕ್ಸಿ ಬ್ಯೂಟಿ ರೇಟ್ ಎಂಬ ಘಟಕದ ಪೂರ್ವಭಾವಿಯಾದ ಅಂಶಗಳು. ವಿಶೇಷವೆಂದರೆ ಈ ಅದ್ಭುತ ಅಂಶವನ್ನು ತೆಂಗಿನೆಣ್ಣೆಯ ಮೂಲಕ ದೇಹವು ಸುಲಭವಾಗಿ ಪಡೆದುಕೊಳ್ಳಬಹುದು. ಆ ಮೂಲಕ ಮೀಡಿಯಂ ಚೈನ್ ಟ್ರೈಗ್ಲಿಸರೈಡ್ ಅಂಶಗಳ ಸೇವನೆಯಿಂದ ಸಿಗುವ ಪ್ರಯೋಜನ ಗಳಾದ ಬುದ್ಧಿಮತ್ತೆಯ ಹೆಚ್ಚುವಿಕೆ ,ಮೆದುಳಿನ ಶಕ್ತಿ ಸಾಮರ್ಥ್ಯಗಳ ಆಧಿಕ್ಯ – ನಮ್ಮದಾಗುವುದು. ಜಪಾನಿನಲ್ಲಿ ನಡೆದ ಇಂತಹ ಒಂದು ಅಧ್ಯಯನ 2016 ರಲ್ಲಿ ಪ್ರಕಟವಾಯಿತು.” ಕೀಟೋನ್ ಜನಕ ಆಹಾರದಲ್ಲಿ ಮೀಡಿಯಂ ಚೈನ್ ಟ್ರೈಗ್ಲಿಸರೈಡ್ ಮಿಳಿತಗೊಂಡಲ್ಲಿ ಸ್ಮರಣಶಕ್ತಿ ಹಾಗೂ ಬೌದ್ಧಿಕ ಶಕ್ತಿಗಳು ವಯಸ್ಸಾದವರಲ್ಲಿ ಊರ್ಜಿತಗೊಳ್ಳುವುದು.” ಈ ವಸ್ತುಸ್ಥಿತಿಯನ್ನು ಪಾರ್ಕಿನ್ಸನ್ ಕಾಯಿಲೆ
ಹಾಗೂ ಟೈಪ್ 1 ಡಯಾಬಿಟಿಸ್ ನಂತಹ ಕ್ಲಿಷ್ಟ ಸಂದರ್ಭಗಳನ್ನು ನಿಭಾಯಿಸಲು ಬಳಸಿಕೊಳ್ಳುವಲ್ಲಿ ವೈಜ್ಞಾನಿಕ ವಲಯದಲ್ಲಿ ಆಸಕ್ತಿ ಕುದುರಿಕೊಂಡಿದೆ.
ಆದರೆ ದುಃಖದಾಯಕ ಸಂಗತಿಯೆಂದರೆ, ವೈದ್ಯ ಜಗತ್ತಿನಲ್ಲಿ ನರಮಂಡಲದ ಅಥವಾ ಇತರ ಕಾಯಿಲೆಗಳಿಗೆ ಇರುವ ಚಿಕಿತ್ಸೆ ,ಔಷಧಗಳ ಬಗ್ಗೆ ಸಿಗುವಷ್ಟು ಪ್ರಮಾಣದ ಸಲಹೆ ಸೂಚನೆಗಳು, ಅವುಗಳನ್ನು ಬರದಂತೆ ತಡೆಯುವ ಉಪಾಯಗಳಿಗೆ ಸಿಗುತ್ತಿಲ್ಲ. ರೋಗಗಳಿಗೆ ಚಿಕಿತ್ಸೆ, ಮದ್ದುಗಳನ್ನು ತೆಗೆದುಕೊಳ್ಳುವುದಕ್ಕೆ ವೈದ್ಯರಲ್ಲಿ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆಯೇ ಹೊರತು ತಡೆಗಟ್ಟುವುದಕ್ಕೆ ಬರುವವರ ಸಂಖ್ಯೆ ತೀರಾ ಕಡಿಮೆ. ವೈದ್ಯರ ಭೇಟಿಯಾದಾಗ ನಮ್ಮ ಆರೋಗ್ಯ ಉಳಿಸಲು ಹಾಗೂ ನಮ್ಮ ಮೆದುಳಿನ ಸಾಮರ್ಥ್ಯ ಉಳಿಸಲು ಉಪಯೋಗವಾಗುವ ಸಮಯ 15 ನಿಮಿಷದಷ್ಟು ಕೂಡ ಇಲ್ಲ!!! ವೈದ್ಯಕೀಯ ವಲಯದಲ್ಲಿ ಕೂಡ ಆಹಾರದ ಪ್ರಭಾವ ಕಾಯಿಲೆಗಳ ಮೇಲೆ ಎಷ್ಟಿದೆ ಎಂಬುದನ್ನು ಆಳವಾಗಿ ಅಧ್ಯಯನ ಮಾಡಿದ ವೈದ್ಯರು ಕಡಿಮೆ.! ಬಹುಶಹ ಮುಂದಿನ ತಲೆಮಾರಿನ ಯುವ ವೈದ್ಯರು ಕಾಯಿಲೆ ತಡೆಗಟ್ಟುವ ಮಾದರಿಯ ಪ್ರಾಕ್ಟೀಸಿಗೆ ಒತ್ತು ಕೊಡಬಹುದು ಏನೋ…..
ಆದುದರಿಂದ ಕಾರ್ಬೋಹೈಡ್ರೇಟ್(ಪಿಷ್ಫ) ಇರುವ ಆಹಾರಗಳ ಬಳಕೆ ಮಿತಿಗೊಳಿಸಿ,. ತರಕಾರಿ ಹೆಚ್ಚು ಬಳಸಿ. ಹಿತಕರವಾದ ಕೊಬ್ಬನ್ನು ಸೇವಿಸಿ. ಪ್ರೊಟೀನ್ ಅಂಶ ಹೆಚ್ಚಿಗೆ ಇರುವ ಬೇಳೆಕಾಳುಗಳ ಬಳಕೆ ಹೆಚ್ಚು ಇರುವಂತೆ ನೋಡಿಕೊಳ್ಳಿ. ಅದಕ್ಕಾಗಿ ಹೆಸರು, ಅಳಸಂಡೆ ಬೀಜಗಳ ಬಳಕೆ ಆಹಾರದಲ್ಲಿ ಹೆಚ್ಚಾಗಲಿ. ಆಹಾರದಲ್ಲಿ ತೆಂಗಿನೆಣ್ಣೆ ,ತೆಂಗಿನಕಾಯಿ ಅಂಶ ಇರುವಂತೆ ನೋಡಿಕೊಂಡರೆ ನರಮಂಡಲಕ್ಕೆ ಒಳ್ಳೆಯದು. ನಾವು ಸೇವಿಸುವ ಧಾನ್ಯಗಳಲ್ಲಿ ನ, ಸಿಹಿತಿಂಡಿಗಳಲ್ಲಿ ನ ಕಾರ್ಬೋಹೈಡ್ರೇಟ್ ದೇಹದಲ್ಲಿ ಹೆಚ್ಚಿನ ಕೊಬ್ಬು ಆಗಿ ಪರಿವರ್ತನೆಗೊಂಡು ಶೇಖರಗೊಳ್ಳುತ್ತದೆಯೇ ಹೊರತು ನಾವು ಆಹಾರದ ಮೂಲಕ ತಿಂದ ಕೊಬ್ಬಿನ ಅಂಶವಲ್ಲ ಎಂಬುದನ್ನು ಗಮನಿಸಿ.
ಡಾ. ಆರ್. ಪಿ. ಬಂಗಾರಡ್ಕ
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ,
ನರಿಮೊಗರು, ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸುಳ್ಯ.
www.prasadini.com.